ಅಗ್ನಿಷ್ಟೋಮ

 ವೇದೋಕ್ತ ಯಜ್ಞಗಳಲ್ಲಿನ ಅನೇಕ ಪ್ರಕಾರಗಳಲ್ಲಿ ಸೋಮಯಾಗಗಳಿಗೆ ಪ್ರಾಶಸ್ತ್ಯವುಂಟು. ಸೋಮಯಾಗಗಳಲ್ಲಿಯೂ ಒಂದರಿಂದ ಹನ್ನೆರಡು ದಿನಗಳವರೆಗೆ ನಡೆಯುವ ಅತಿರಾತ್ರ, ಉಕ್ಥ್ಯ ಮುಂತಾದ ಬೇರೆ ಬೇರೆ ಏಳು ಪ್ರಕಾರಗಳುಂಟು. ಈ ಪ್ರಕಾರಗಳಲ್ಲಿ (ಸಂಸ್ಥಾ) ಅಗ್ನಿಷ್ಟೋಮ ಪ್ರಥಮವೂ ಅತ್ಯಂತ ಸರಳವೂ ಆದುದು. ಈ ಯಾಗದ ಅವಧಿ ಒಂದೇ ದಿನ. ಬೇಕಾಗುವ ಯಾಜ್ಞಿಕರು ಹದಿನಾರು. ಅಗ್ನಿಯನ್ನು ನುತಿಸುವ ಸ್ತೋಮ ಎಂದರೆ ತೃಚ (ಮೂರು ಋಕ್ಕುಗಳ ಗುಂಪುಗಳು) ಕಡೆಯಲ್ಲಿ ಬರುವುದರಿಂದ ಈ ಹೆಸರು ಯಾಗಕ್ಕೆ ಅನ್ವರ್ಥಕವಾಗಿದೆ. ಇದರಲ್ಲಿ ಹನ್ನೆರಡು ಶಸ್ತ್ರಗಳು (ಹಾಡದ ಮಂತ್ರಗಳು) ಮತ್ತು ಮೂರು ಸವನಗಳು, ಕಡೆಗೆ ಸಾಮಗಾನ ಬರುತ್ತವೆ. ವಿಧಿಯ ವಿವರಗಳು ತಾಂಡ್ಯ ಮಹಾಬ್ರಾಹ್ಮಣದ ಆರನೆಯ ಅಧ್ಯಾಯದಲ್ಲಿವೆ. ಇದು ಅಗ್ನಿದೇವತಾಕಪಶುಯಾಗ.         

(ಕೆ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ